ಹೌದು ಸ್ವಾಮೀ, ನಾನೊಮ್ಮೆ ಶಿಮ್ಲಾ ಹೋಗಿದ್ದೆ. ದೆಹಲಿಯಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕ ಆಫೀಸ್ ಕೆಲಸ ಮಾಡಿ ಮಾಡಿ ಕೊನೆಗೆ ಸಾಕಪ್ಪಾ ಎನ್ನುವಷ್ಟು ಕೋಪ ಬಂತು. ಸುಸ್ತಾಗಿ ಒಂದು ಕಪ್ ಕಾಫೀ ಹೀರುತ್ತಿದ್ದಾಗ ಪರಿಚಯಸ್ತರೊಬ್ಬರು ವಾಟ್ಸ್ ಆಪ್ ನಲ್ಲಿ ಚಾಟಿಂಗ್ ಮಾಡ್ತಾ ಈ ವಾರಾಂತ್ಯ ಖಾಲಿ ಇದ್ದೇನೆ. ಏನಾದರೂ ಟ್ರಿಪ್ ಹಾಕುವನ ಎಂದು ಕೇಳಿದರು. ಸರಿ. ನನಗೂ ಬೋರ್ ಆಗಿತ್ತು ಹೋಗೋಣ ಎಂದು ಪ್ಲಾನಿಂಗ್ ಹಾಕುತ್ತಾ ಕುಳಿತೆ. ಅದು ಜನವರಿ 26-27ರ ಸಮಯ ದೆಹಲಿಯಲ್ಲಿ ಫುಲ್ ಚಳಿ ಇತ್ತು. ಸೊ ಸ್ವಲ್ಪ ಐಸ್ ಪ್ರದೇಶಕ್ಕೆ ಹೋಗಿ ಚಿಲ್ ಆಗಿ ಬರೋಣ ಎಂದು ಬಹಳಷ್ಟು ದಿನದಿಂದ ಪ್ಲಾನ್ ಹಾಕುತ್ತಾ ಇದ್ದೆ. ಇವರು ಕೇಳಿದ್ದು ತಕ್ಷಣ ಫ್ಲಾಶ್ ಆಯಿತು. ಶಿಮ್ಲಾ ಹೋಗೋಣವಾ ಎಂದು ಕೇಳಿದೆ. ಅವರೂ ಏನೂ ಅಭ್ಯಂತರ ಇಲ್ಲ ಎಂದು ಹೇಳಿದ ಮೇಲೆ ಪ್ಲಾನ್ ಹಾಕಿದೆ.
![]() |
| ಕುಫ್ರಿ ದಾರಿಯ ಮಧ್ಯದಲ್ಲಿ ನನ್ನ ಮೊಬೈಲ್ ನಲ್ಲಿ ತೆಗೆದ ಚಿತ್ರ |
ಶಿಮ್ಲಾ ಎಂದಾಗ ನನಗೆ ನೆನಪಾದದ್ದು ಟಾಯ್ ಟ್ರೈನ್. ಬಹಳಷ್ಟು ಬಾರಿ ಸಿಮ್ಲಾ ಹೆಲಿಕಾಪ್ಟರ್ ಮತ್ತು ವಿಮಾನದ ಮೂಲಕ ಹೋಗಿದ್ದೆ. ಆದರೆ ರೈಲಿನ ಮೂಲಕ ಯಾವತ್ತು ಹೋಗಿರಲಿಲ್ಲ. ಸರಿ ಈ ಬಾರಿ ಹೋದರೆ ರೈಲಿನಲ್ಲೇ ಎಂದು irctc ಮೂಲಕ ಟಿಕೆಟ್ ಚೆಕ್ ಮಾಡ್ತಾ ಇದ್ದಾಗ ಪುಣ್ಯದಿಂದ ಕನೆಕ್ಟ್ ಆಗುವ ಉಪಾಯ ಸಿಕ್ಕಿತು. ಮೊದಲು ದೆಹಲಿಯಿಂದ ಕಾಲ್ಕಾ (ಹರ್ಯಾಣ)ದ ತನಕ ಹವ್ಡಾ-ಕಾಲ್ಕಾ ಮೇಲ್ ನಲ್ಲಿ ಹೋಗಿ ಅಲ್ಲಿಂದ ಬೆಳಿಗ್ಗೆ 6.20ರ ರೈಲಿನಲ್ಲಿ ಸಿಮ್ಲಾ ಹೋಗುವುದು ಎಂದು ಪ್ಲಾನ್ ಹಾಕಿದೆ. ರೈಲು ಹೊರಡುವ ಎರಡು ದಿನದ ಮೊದಲಿನ ತನಕ ರೈಲಿನ ಸಮಯ ನೋಡಿದರೆ ತುಂಬಾ ತಡವಾಗಿ ಬರುತ್ತದೆ ಎಂದು ತೋರಿಸುತ್ತಿತ್ತು. ಅಬ್ಬಾಬ್ಬಾ ಇಷ್ಟೆಲ್ಲಾ ತಡವಾಗಿ ತಲುಪಿದರೆ ನಾನು ಅಲ್ಲಿಂದ ಹೋಗುವ ಟಾಯ್ ಟ್ರೈನ್ ತಪ್ಪಿಸಿಕೊಳ್ಳುತ್ತೇನೆ ಎಂದು ರೈಲನ್ನು ರದ್ದು ಪಡಿಸಿ ಬಸ್ಸನ್ನು ಬುಕ್ ಮಾಡಿದೆ. ರಾತ್ರಿ 9 ಘಂಟೆಗೆ ಬಸ್ಸು ರಾಮಕೃಷ್ಣ ಆಶ್ರಮ ಮಾರ್ಗ ಮೆಟ್ರೋ ಪಕ್ಕದಿಂದ ಹೊರಟು ರಾತ್ರಿ 1.30ಕ್ಕೆ ಕಾಲ್ಕಾ ನಿಲ್ದಾಣಕ್ಕೆ ಬರುತ್ತದೆ ಎಂದು ಸಮಯ ಹಾಕಿತ್ತು. ನಾನು ಬೆಳಿಗ್ಗೆ ಆಫೀಸ್ ಬರುವಾಗ ನನ್ನ ಮಿಲಿಟರಿ ರಾಕ್ಸಾಕ್ ಅನ್ನು ತೆಗೆದುಕೊಂಡು ಬಂದಿದ್ದೆ. ನನ್ನೊಂದಿಗೆ ಬರುವ ಮಿತ್ರರಿಗೂ ಹೇಳಿದ್ದೆ ನೀವು ಆಫೀಸ್ ಹೋಗುವಾಗ ಬ್ಯಾಗ್ ತೆಗೆದುಕೊಂಡು ಬನ್ನಿ. ಆಮೇಲೆ ತಡಮಾಡಬೇಡಿ ಎಂದು. ಆದರೆ ಅವರಿಗೆ ಏನೋ ಸಮಸ್ಯೆ ಬಂದು ಅವರು ಬ್ಯಾಗ್ ಮನೆಯಲ್ಲಿ ಬಿಟ್ಟು ಬಂದರು. ಸಂಜೆ ನಾನು ಆಫೀಸ್ ನಿಂದ ಹೊರಟು ಅವರಲ್ಲಿ ಸರಿಯಾಗಿ 6.40ಕ್ಕೆ ಮೆಟ್ರೋ ಸ್ಟೇಷನ್ ನಲ್ಲಿ ಸಿಗಲು ಹೇಳಿದೆ. ಅವರು ಪುಣ್ಯಾತ್ಮರು ಬರುವಾಗ 7.45. ತಕ್ಷಣ ಸಿಕ್ಕ ಮೆಟ್ರೋ ಹಿಡಿದು ಬಸ್ಸು ನಿಲ್ದಾಣ ತಲುಪುವಾಗ 8.55. ಬಸ್ಸು ಸುಮಾರು 9.10ಕ್ಕೆ ಬಂದಿತು. ಅಲ್ಲಿಂದ 9.30ಕ್ಕೆ ಹೊರಟು ದೆಹಲಿಯ ಹೊರವಲಯ ಮಜ್ನು ಕಿ ಟಿಲಾ ಎಂಬಲ್ಲಿ ಸುಮಾರು 11 ಘಂಟೆ ತನಕ ನಿಂತಿತ್ತು. ಹೋಗಿ ಕೇಳಿದರೆ ಇಂಜಿನ್ ನಲ್ಲಿ ಏನೋ ಸಮಸ್ಯೆ ಇದೆ. ಅದಕ್ಕಾಗಿ ನಿಲ್ಲಿಸಿದ್ದು ಎನ್ನುವ ಹಾರಿಕೆಯ ಉತ್ತರ ಬೇರೆ. ಕೊನೆಗೆ ಬಸ್ಸು 11.15ಕ್ಕೆ ಹೊರಟಿತು. ಅದೇ ಸಮಯಕ್ಕೆ ನನಗೆ ಸಂದೇಶ ಬಂತು ನಿಮ್ಮ ಬೆಳಿಗ್ಗೆ 6.20ರ ರೈಲಿನ ಟಿಕೆಟ್ ಕಂಫಾರ್ಮ್ ಆಗಿಲ್ಲ ಎಂದು. ತಕ್ಷಣ ನೀನು IRCTC ನೋಡಿದರೆ ಅದಕ್ಕಿಂತ ಮೊದಲಿದ್ದ 5.10ರ ರೈಲಿನಲ್ಲಿ ಸೀಟ್ ಇತ್ತು. ತಕ್ಷಣ ಟಿಕೆಟ್ ಮಾಡಿದೆ. ಬಸ್ಸಿನ ಪುಣ್ಯಾತ್ಮ ಬೇಗ ಬೇಗ ತಲುಪಿಸಪ್ಪಾ ಎಂದು ಪ್ರಾರ್ಥನೆ ಮಾಡಿ ಹೊರಟೆವು. ನಡುವೆ ಒಂದುಕಡೆ ಬಸ್ಸು ನಿಂತಿತು. ಅಲ್ಲಿ ಹೋಗಿ ಊಟ ಮಾಡಿ ಬಂದೆವು. ಅಲ್ಲಿದ್ದ ಎಲ್ಲಾ ಬಸ್ಸು ಹೊರಟರೂ ನಮ್ಮ ಬಸ್ಸು ಹೊರಟಿಲ್ಲ. ನೋಡಿದರೆ ಇಬ್ಬಿಬ್ಬರು ಬಸ್ಸಿನ ಇಂಜಿನ್ ಸರಿಪಡಿಸುತ್ತಾ ಇದ್ದರು. ಕೊನೆಗೆ ಬಸ್ಸು ಅಲ್ಲಿಂದ ಹೊರಟಾಗ 2.30 ಘಂಟೆ ಬೆಳಿಗ್ಗೆ. ನಾನು ಮ್ಯಾಪ್ ನಲ್ಲಿ ನೋಡ್ತಾ ಇದ್ದೆ ಈ ಬಸ್ಸು ಕಾಲ್ಕಾ ಬಳಿ ಟರ್ನ್ ತೆಗೆದುಕೊಳ್ಳಬೇಕಾಗಿತ್ತು ಸೀದಾ ಹೋಯಿತು. ಇದೇನಪ್ಪಾ ಸಮಸ್ಯೆ ಎಂದು ಡ್ರೈವರ್ ಬಳಿ ಕೇಳಿದರೆ ಈ ಬಸ್ಸು ಕಾಲ್ಕಾ ಹೋಗುವುದಿಲ್ಲ ನೀವು ನಡುವೆ ಇಳಿದು ಇಲ್ಲಿಂದ ಬೇರೆ ಹೋಗಿ ಎಂದನಪ್ಪ. ಇನ್ನು ರೈಲಿನ ಆಸೆ ಬಿಟ್ಟು ಬಸ್ಸಿನಲ್ಲೇ ಹೋಗುವ ಎಂದು ಸಮಯ ನೋಡಿದೆ ಅವಾಗ 4.30AM ಆಗಿತ್ತು. ಕೊನೆಗೆ ಅವರಲ್ಲಿ ಚರ್ಚೆ ಮಾಡಿ ಬೈದು ಎಲ್ಲ ಮಾಡಿದ ನಂತರ ಆತ ಪರವಾನು ಎನ್ನುವ ಜಾಗದಲ್ಲಿ ಒಂದು ಪೋಲಿಸ್ ಚೆಕ್ ಪಾಯಿಂಟ್ ನಲ್ಲಿ ಬಸ್ಸು ನಿಲ್ಲಿಸಿ ಆ ಪೋಲಿಸ್ ಹತ್ತಿರ ಹೋಗಿ ನಿಮ್ಮ ಸಮಸ್ಯೆ ಹೇಳಿ ಅವರು ನಿಮ್ಮನ್ನು ರೈಲ್ವೆ ಸ್ಟೇಷನ್ ಗೆ ಬಿಡಲು ವ್ಯವಸ್ತೆ ಮಾಡುತ್ತಾರೆ ಎಂದು ಹೇಳಿ ಪರಾರಿ ಆದ. ನಂತರ ಪೋಲಿಸ್ ಹತ್ತಿರ ಹೋಗಿ ನನ್ನ ಪಾಡನ್ನು ಹೇಳಿದೆ. ಏನೋ ನಮ್ಮ ಅಜ್ಜಿಪುಣ್ಯ ಚೆನ್ನಾಗಿ ಇತ್ತು ಒಂದು ಗಾಡಿ ಅದೇ ದಾರಿಯಲ್ಲಿ ಬಂತು ಅದರಲ್ಲಿದ್ದ ಮಧ್ಯವಯಸ್ಕ ವ್ಯಕ್ತಿ ತನ್ನ ಬಾಸ್ ಅನ್ನು ಕರೆದುಕೊಂಡು ಬರಲು ರೈಲ್ವೆ ಸ್ಟೇಷನ್ ಕಡೆ ಹೋಗುತ್ತಿದ್ದ. ಖುಷಿಯಿಂದ ಒಳಗೆ ಹೋಗಿ ಕುಳಿತೆ. ಆತ ಅಲ್ಲೇ ಪಕ್ಕದಲ್ಲಿದ್ದ ಸೊಲಾನ್ ಎನ್ನುವ ಹಳ್ಳಿಯ ವ್ಯಕ್ತಿ. ನಮ್ಮ ದಕ್ಷಿಣ ಭಾರತ ಎಲ್ಲ ತಿರುಗಿದ್ದನಂತೆ. ಉಡುಪಿ ದೇವಸ್ಥಾನದ ಊಟದ ಬಗ್ಗೆ ಕೂಡ ಹೊಗಳಿದ. ಮಾತು ಮುಗಿಯುತ್ತಾ ರೈಲ್ವೆ ನಿಲ್ದಾಣಕ್ಕೆ ತಲುಪಿದೆವು. ಬಾಡಿಗೆ ಎಂದು 500ರೂ ನ ನೋಟನ್ನು ಆತನಿಗೆ ಕೊಟ್ಟರೆ ಬೇಡ ಎನ್ನುವುದೇ ? ಕೊನೆಗೆ ಒಂದು ಹಸ್ತ ಲಾಘವ ಕೊಟ್ಟು ಆತನಿಂದ ಬೀಳ್ಕೊಟ್ಟು ರೈಲು ಹತ್ತಿದೆವು. ನಾವು ರೈಲಿಗೆ ಹತ್ತಿ ಒಂದೇ ನಿಮಿಷದಲ್ಲಿ ರೈಲು ಹೊರಟಿತು. ರೈಲಿನಲ್ಲಿ ನಮ್ಮ ಸೀಟಿನಲ್ಲಿ ಕುಳಿತೆವು. ನಮ್ಮ ಮುಂದಿನ ಸೀಟ್ ನಲ್ಲಿ ಒಂದು ಜೋಡಿ ಕುಳಿತಿತ್ತು. ಇಬ್ಬರೂ ಕಾಲೇಜ್ ದೊಸ್ತಿಗಳಂತೆ. ಅವರ ಜೊತೆ ಮಾತನಾಡುತ್ತಾ ಗುಡ್ಡಗಳ ನಡುವಿನ ಸೌಂದರ್ಯವನ್ನು ಆಹ್ವಾನಿಸುತ್ತಾ ಪೂರ್ಣಚಂದ್ರ ತೇಜಸ್ವಿ ಅವರ ಚಿದಂಬರ ರಹಸ್ಯ ಪುಸ್ತಕವನ್ನು ಓದುತ್ತಾ ಪ್ರಯಾನಿಸಿದೆ.
![]() |
| ಗುಡ್ಡಗಾಡಿನ ನಡುವೆ ತೇಜಸ್ವಿ ಅವರ ಪುಸ್ತಕ |
ಈ ಟಾಯ್ ರೈಲು ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು ಬರುತ್ತಾರೆ ಎಂದು ವಿಶೇಷ ಹೊಸರೈಲು ಹಾಕಿದ್ದಾರೆ ಅಂತೆ. ಇಲ್ಲಿ ಫಸ್ಟ್ ಕ್ಲಾಸ್ ಮತ್ತು ಚೇರ್ ಕಾರ್ ಎನ್ನುವ ಸೆಕ್ಷನ್ ಇದೆ. ಫಸ್ಟ್ ಕ್ಲಾಸ್ ಎಂದರೆ ಇದು ಮಾಮೂಲು ರೈಲಿನಂತೆ ಇರಬಹುದು ಎಂದು ತಿಳಿಯಬೇಡಿ. ಫಸ್ಟ್ ಕ್ಲಾಸ್ ಎಂದರೆ ಒಂದು ತಗಡು ಡಬ್ಬಿಯಂತೆ ಇರುವ ಭೋಗಿ ಅದರಲ್ಲಿ 10 ಸೀಟ್ ಗಳು. ಮುಂದೆ ಹಿಂದೆ ಆರಾಮವಾಗಿ ಪುಶ್ ಮಾಡಲು ಕೂಡ ಸಾಧ್ಯ ಆಗದಂತಹ ಸೀಟ್. ಆದರೆ ನಿಮ್ಮ ಮುಖವನ್ನು ಬೇಕಾದ ಕಡೆ ತಿರುಗಿಸುವ ಒಂದು ಸೌಲಭ್ಯ ಆ ರೈಲಿನಲ್ಲಿದೆ. ಹೀಗೆ ಆರಂಭವಾದ ನಮ್ಮ ರೈಲು ಪ್ರಯಾಣ ಸುಮಾರು 7.15ಕ್ಕೆ ಶೋಗ್ಗಿ ಎನ್ನುವ ಸ್ಟೇಷನ್ ನಲ್ಲಿ ಚಹಾ ಕುಡಿಯಲು ನಿಲುಗಡೆ ಕೊಟ್ಟರು. ಸರಿ ಸ್ವಲ್ಪ ಹೊಟ್ಟೆ ಪೂಜೆ ಮಾಡೋಣ ಎಂದು ಕೆಳಗೆ ಇಳಿದು ಬ್ರೆಡ್ ಕಟ್ಲೀತ್ ಮತ್ತು ಚಹಾ ತೆಗೆದುಕೊಂಡು ಬಂದೆ. ಸ್ನೇಹಿತರೆ, ಎರಡು ಕೈಯಲ್ಲಿ ಬಿಸಿಬಿಸಿ ಚಹಾ ಇದೆ ಚಳಿ ಎಷ್ಟು ಎಂದರೆ ಎರಡೂ ಕೈ ಗಡಗಡ ನಡುಗಿ ಚಹಾ ಅರ್ಧದಷ್ಟು ಚೆಲ್ಲಿತ್ತು. ಚಹಾ ಸೇವನೆಯ ನಂತರ ಪುನಃ ರೈಲು ಪ್ರಯಾಣ.
ಬೆಳ್ಳಂ ಬೆಳಿಗ್ಗೆ ಸೂರ್ಯೋದಯವಾದಾಗ ಕಂಡದ್ದು ಹೀಗೆ
ಕುಳಿತು ಕುಳಿತು ಸ್ವಲ್ಪ ಬೋರ್ ಆದ ಅನುಭವ ಆದಾಗ ಎದ್ದು 10 ಮೀಟರ್ ಉದ್ದದ ಭೋಗಿಯನ್ನು ಭ್ರಮಣ ಮಾಡಲು ಆರಂಭಿಸಿದೆ. ಹಿಂದಿನ ಸೀಟ್ ನಲ್ಲಿ ಟಿಟಿ ಮತ್ತು ಓರ್ವ ರೈಲ್ವೆ ಅಧಿಕಾರಿ ಕುಳಿತಿದ್ದ. ಮಾತನಾಡುತ್ತಾ ಆತನ ಪರಿಚಯ ಆಯಿತು. ಆತನ ಹೆಸರು ಲೆಫ್ಟಿನೆಂಟ್ ಆದಿತ್ಯ ಶರ್ಮಾ. ಭಾರತೀಯ ಸೇನೆಯ ಪ್ರಾದೇಶಿಕ ಸೈನ್ಯ ವಿಭಾಗದಲ್ಲಿ ಅಧಿಕಾರಿ ಮತ್ತು ರೈಲ್ವೆ ನಲ್ಲಿ ಇಂಜಿನಿಯರ್. ಆತನ ಜೊತೆ ಕಥೆ-ಪುರಾಣ , ಭೌಗೋಲಿಕ ರಾಜಕೀಯ ವಿಚಾರ ಮಾತನಾಡಿ ಈ ರೈಲ್ವೆ ಲೈನ್ ಬಗ್ಗೆ ಹಲವಾರು ವಿಚಾರವನ್ನು ತಿಳಿದುಕೊಂಡೆ. ಆತನ ಪ್ರಕಾರ ಈ ರೈಲನ್ನು ಕಲ್ಕಾದಿಂದ ಚಂಡೀಗಡ ತನಕ ವಿಸ್ತರಿಸಿದಲ್ಲಿ ಬಹಳಷ್ಟು ಉಪಕಾರ ಇದೆ. ಅಲ್ಲದೆ ಉತ್ತಮ ಇನ್ಕಮ್ ಕೊಡ ಬರುತ್ತದೆ ಎಂದು ತನ್ನ ಯೋಜನೆಗಳ ಬಗ್ಗೆ ಹೇಳಿದ. ದೀರ್ಘವಾದ ಸಮಾಲೋಚನೆ ನಡೆಸುತ್ತಲೇ ಸಿಮ್ಲಾ ಹತ್ತಿರ ಹತ್ತಿರ ತಲುಪಿದೆವು. ಅಲ್ಲಿ ಬಿದ್ದ ಐಸ್ ತೋರಿಸುತ್ತಾ ಹೇಳಿದ ನೀವು ಮುಂದಿನ ವಾರ ಬಂದರೆ ನಿಮ್ಮ ರೈಲಿನ ಕಿಟಕಿ ತೆರೆದರೆ ಐಸ್ ಸಿಗುತ್ತದೆ ಎಂದು. ನಾನು ಖಂಡಿತ ನಮ್ಮ ಖದೂಸ್ ಬಾಸ್ ರಜೆ ಕೊಟ್ಟರೆ ಬಂದೆ ಬರುತ್ತೇನೆ ಎಂದು ಹೇಳಿದೆ. ಅಷ್ಟರಲ್ಲಿ ಸಿಮ್ಲಾ ನಿಲ್ದಾಣ ಬಂತು. ನಾನು ನನ್ನ ಮಿತ್ರರೂ ಇಬ್ಬರೂ ಇಳಿದು ಹೊರಗೆ ಕ್ಯಾಬ್ ಹುಡುಕಲು ಹೊರಟೆವು.
![]() |
| ರೈಲಿನ ಒಳಗಿನ ಸೀಟು |
ನಮ್ಮ ಹೋಟೆಲ್ ಇದ್ದದ್ದು ಫಾಗು ಎನ್ನುವ ಜಾಗದಲ್ಲಿ. ಇದು ಸಿಮ್ಲಾ ಪ್ರದೇಶದ ಇನ್ನೊಂದು ಭಾಗವಾದ ಕುಫ್ರಿಯಿಂದ ಸುಮಾರು 10 ಕಿಮಿ ದೂರ ಇದ್ದ ಪ್ರದೇಶ. ಯಾವುದೇ ಕ್ಯಾಬ್ ಡ್ರೈವರ್ ಬಳಿ ಕೇಳಿದರೆ ಯಾರೂ ಬರಲು ಒಪ್ಪಲಿಲ್ಲ.
ಕೊನೆಗೆ ಒಬ್ಬ ಕ್ಯಾಬ್ ಡ್ರೈವರ್ ಬರಲು ಒಪ್ಪಿದ. ಆತ ಸುಮಾರು 2000ರೂ ಆಗುತ್ತದೆ ಆದರೆ ಈಗ ಮೇಲಿನ ಮಾರ್ಗವು ಬಂದ್ ಆಗಿದೆ. ನೀವು ಸುಮಾರು 2 ಘಂಟೆಗೆ ಬನ್ನಿ ಎಂದ. ಏನಕ್ಕೂ ಇರಲಿ ಎಂದು ನಾನು ನನ್ನ ಹೋಟೆಲ್ ಡ್ರೈವರ್ ಗೆ ಕರೆಮಾಡಿ ವಿಚಾರಿಸಿದೆ. ಆಗ ಅವನು ಹೇಳಿದ ನನ್ನ ಕಾರ್ ಒಂದು ಕೆಳಗೆ ಸಿಮ್ಲಾ ಇಂದ ಬರುವುದಿದೆ. ನೀವು ಒಂದು ಕೆಲಸ ಮಾಡಿ ಅಲ್ಲೇ ಇರಿ ನೀವು. ನಾನು ನಿಮ್ಮನ್ನು ಬಂದು ಕರೆದುಕೊಂಡು ಹೋಗುತ್ತೇನೆ ಎಂದ. ನಾನು ಕೂಡ ಸರಿ ಎಂದೇ. ಆಮೇಲೆ ನಾವಿಬ್ಬರೂ ಸಿಮ್ಲಾ ರೈಲ್ವೇ ನಿಲ್ದಾಣದಿಂದ ತಿಂಡಿ ತಿನ್ನಲು ಸರಿಯಾದ ಹೋಟೆಲ್ ಹುಡುಕಲು ಆರಂಭಿಸಿದೆವು. ದಾರಿಯಲ್ಲಿ ಕ್ಯಾಬ್ ಡ್ರೈವರ್, ಗೈಡ್ ಗಳು ಬಂದು ಕ್ಯಾಬ್, ಹೋಟೆಲ್, ಸ್ಥಳ ಪರಿಚಯಕ್ಕೆ ಜನ ಬೇಕೇ ಎಂದು ಕೇಳುತ್ತಾ ಇದ್ದರು. ಅವರಿಗೆ ಬೇಡಾ ಬೇಡಾ ಎಂದು ಹೋಗುತ್ತಿದ್ದೆ. ಕೊನೆಗೆ ಒಂದು ಕಡೆ ಟೂರಿಸ್ಟ್ ಮಾಹಿತಿ ಕೇಂದ್ರ ಸಿಕ್ಕಿತು. ಅಲ್ಲಿಗೆ ಹೋಗಿ ಸಿಮ್ಲಾ ಗೈಡ್ ಬುಕ್ ಖರೀದಿ ಮಾಡಿದೆ. ನಂತರ ನಾವು ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಹೋಟೆಲ್ ಒಂದರಲ್ಲಿ ಅಲೂ ಪರೋಟ ಮತ್ತು ಚಹಾ ಸೇವನೆ ಮಾಡಿದೆವು. ನಂತರ ಅಲ್ಲಿಂದ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ರಾಮ್ ಬಜಾರ್ ಗೆ ಹೋದೆವು. ಅಲ್ಲಿ ನನಗೆ ಒಂದು ಹ್ಯಾಂಡ್ ಗ್ಲೌಸ್ ಚೆನ್ನಾಗಿ ಕಂಡಿತು. ರೇಟ್ ಎಷ್ಟು ಎಂದು ಕೇಳಿದರೆ ಪುಣ್ಯಾತ್ಮ 1 ಸಾವಿರ ಎಂದು ನೀವು 600 ಕೊಡಿ ಎನ್ನುವುದೇ ? ನನಗೂ ಇತ್ತು ಸ್ವಲ್ಪ ಗತ್ತು. ಭಾಯಿ ದೇನಾ ಹೈ ತೊಹ್ 250 ಮೇನ್ ದೇನಾ ವರನಾ ನಹಿ ಚಾಹಿಯೇ ಎಂದೇ. ಕೊನೆಗೆ ಚರ್ಚೆ ಮಾಡಿ 300 ರೂ ಗೆ ಒಂದುಜೋಡಿ ಗ್ಲೌಸ್ ತೆಗೆದುಕೊಂಡೆ. ನಂತರ ಅಲ್ಲಿಂದ ಕೆಳಗೆ ಬಂದಾಗ ಹೋಟೆಲ್ ಮಾಲಿಕನ ಕರೆ ಬಂತು. ನೀವು ಇರುವ ಪ್ರದೇಶದಲ್ಲಿ ತುಂಬಾ ಟ್ರಾಫಿಕ್ ಇದೆ. ನೀವು ಅಲ್ಲಿಂದ ಲಕ್ಕಡ್ ಬಜಾರ್ ಗೆ ಬಂದರೆ ಅನುಕೂಲ ಆಗುತ್ತದೆ ಎಂದು. ಕೊನೆಗೆ ನಾನು ಅಲ್ಲಿಗೆ ಹೇಗೆ ಹೋಗುವುದು ಎಂದು ಕ್ಯಾಬ್ ನವರನ್ನು ಕೇಳಿದರೆ 500 ಕೊಡಿ ಕರೆದುಕೊಂಡು ಹೋಗುತ್ತೇವೆ ಎನ್ನುವುದೇ. ಕೊನೆಗೆ ಅಲ್ಲಿದ್ದ ಪೋಲಿಸ್ ಒಬ್ಬರಲ್ಲಿ ಕೇಳಿದರೆ ಮುಂದೆ ಇರುವ ಬಸ್ಸು ಹಿಡಿಯಿರಿ ತಲೆಗೆ 5 ರೂ ಕೊಟ್ಟರೆ ಕರೆದುಕೊಂಡು ಹೋಗುತ್ತಾರೆ ಎಂದ. ಹಾಗೆ ಮಾಡಿ ಬಸ್ಸು ಹಿಡಿದಾಗ ನಾವಿಬ್ಬರು ಫುಲ್ ಖುಷ.
ಕುಫ್ರಿ ದಾರಿ ಮಧ್ಯದಲ್ಲಿ ಕಾರು ನಿಲ್ಲಿಸಿದಾಗ ಮಾಡಿದ ತುಂಟಾಟ
ಲಕ್ಕಡ್ ಬಜಾರ್ ತಲುಪಿ ಕೆಲವೇ ನಿಮಿಷದಲ್ಲಿ ನಮ್ಮ ಕ್ಯಾಬ್ ಬಂತು. ಹೋಟೆಲ್ ಓನರ್ ಮತ್ತು ಆತನ ಪಾರ್ಟ್ನರ್ ಇಬ್ಬರು ಬಂದಿದ್ದರು. ಅವರೊಂದಿಗೆ ಹರಟುತ್ತಾ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಇಡೀ ಘಾಟ್ ಪ್ರದೇಶವು ಟ್ರಾಫಿಕ್ ನಿಂದ ಜಾಮ್ ಆಗಿತ್ತು. ಹೋಟೆಲ್ ಓನರ್ ಅವರು ಡೆಲ್ಲಿ-ಪಂಜಾಬ್ ಡ್ರೈವರ್ ಗಳಿಗೆ ಬೈಯುತ್ತಾ ಕಥೆಯನ್ನು ಹೇಳಿತ್ತಾ ಇದ್ದರು.
ನಮ್ಮ ಹೋಟೆಲ್ ಮಾಲೀಕ ಹಿಮಾಚಲದ ಪಂಜಾಭಿ ವ್ಯಕ್ತಿ. ಹಿಮಾಲಯದ ಹಲವಾರು ಕಥೆಗಳನ್ನು ಹೇಳುತ್ತಿದ್ದ. ದಾರಿಯಲ್ಲಿ ತುಂಬಾ ಟ್ರಾಫಿಕ್ ಜಾಮ್ ಇದ್ದುದರಿಂದ ನಡು-ನಡುವೆ ಕಾರನ್ನು ನಿಲ್ಲಿಸಿ ಫೋಟೋ ಶೂಟ್ ಮಾಡುತ್ತಿದ್ದೆವು. ನನ್ನ ಜೊತೆಗಿದ್ದ ಮಿತ್ರರು ಸ್ಲೋ ಮೋಶನ್ ವೀಡಿಯೊ ಮೂಲಕ ಐಸ್ ಹೊಡೆಯುತ್ತಿದ್ದರು. ಕೊನೆಗೆ ನಮ್ಮ ಕಾರು ಕುಫ್ರಿ ಪ್ರದೇಶವನ್ನು ದಾಟಿತು. ಅಲ್ಲಿಯ ತನಕ ಕಾರು, ಬಸ್ಸು ಬಂದು ಇಡೀ ಮಾರ್ಗವನ್ನು ಜಾಮ್ ಮಾಡಿ ಹಾಕಿತ್ತು. ಕೊನೆಗೆ ಕುಫ್ರಿ ದಾಟಿದ್ದೆ ನಮಗೆ ಯಾವುದೇ ಜಾಮ್ ಸಿಕ್ಕಿಲ್ಲ.
![]() |
| ನಮ್ಮ ಹೋಟೆಲ್ ನಲ್ಲಿ ಕಂಡ ದೃಶ್ಯ |
ಕುಫ್ರಿಯಿಂದ ಸುಮಾರು 5 ಕಿಮಿ ದೂರದಲ್ಲಿ ನಮ್ಮ ಹೋಟೆಲ್ ಇತ್ತು. ಶನಿವಾರ ಬೆಳಿಗ್ಗೆ ಸಮಯ ಆಗಿದ್ದರಿಂದ ಕುಫ್ರಿ ಹಳ್ಳಿ ಇಡೀ ಜನರಿಂದ ತುಂಭಿ ಹೋಗಿತ್ತು. ಎಷ್ಟು ಎಂದರೆ ಸುಮಾರು 800 ಕ್ಕೂ ಹೆಚ್ಚು ಕಾರು ಬಸ್ಸುಗಳು ರಸ್ತೆಯ ಇಕ್ಕೆಲದಲ್ಲಿ ಪಾರ್ಕ್ ಮಾಡಿ ಹೆಚ್ಚಿನ ಜಾಮ್ ಆಗಲು ಕಾರಣವಾಗಿತ್ತು. ಅದನ್ನು ತಡೆಯಲು ಪೊಲೀಸರು ಮಾಡುತ್ತಿದ್ದ ಹರ ಸಾಹಸವನ್ನು ಅಂತು ನೋಡಿ ಸಾಕಾಯ್ತು. ಕುಫ್ರಿ ದಾಟಿದ್ದೆ ನಮಗೆ ಯಾವುದೇ ಅಡೆ-ತಡೆ ಇಲ್ಲದೆ ಸಲೀಸಾದ ಮಾರ್ಗ ಸಿಕ್ಕಿತ್ತು, ದಾರಿಯಲ್ಲಿ ಐಸ್ ಬಿದ್ದಿದ್ದರಿಂದ ನಮ್ಮ ಡ್ರೈವರ್ ನಿಧಾನವಾಗಿ ಗಾಡಿ ಚಾಲಾಯಿಸುತ್ತಿದ್ದರು. ದಾರಿಯಲ್ಲಿ ಐಸ್ ನಿಂದ ನಮ್ಮ ಕಾರು ಎರಡು ಮೂರುಸಲ ಜಾರಿ ರಸ್ತೆಯ ಬದಿಗೆ ಬಂದಿತ್ತು. ಸ್ವಲ್ಪ ಮುಂದೆ ಒಂದು ಬಸ್ಸು ಕೂಡ ಜಾರಿ ಸಣ್ಣ ಪೆಟ್ಟು ಮಾಡಿಕೊಂಡು ನಿಂತಿತ್ತು. ಕೊನೆಗೆ ನಾವು ಸುಮಾರು 3 ಘಂಟೆಗಳ ಪ್ರಯಾಣದ ನಂತರ ಹೋಟೆಲ್ ರೂಂ ಗೆ ತಲುಪಿದೆವು. ಚಳಿಯು ಸುಮಾರು 1 ಡಿಗ್ರೀ ಇತ್ತು. ಬಹಳ ಕಡಿಮೆ ಚಳಿ ಇದ್ದ ಕಾರಣ ಹೋಟೆಲ್ ನಲ್ಲಿ ನೀರು ಬರುತ್ತಿರಲಿಲ್ಲ. ನಮಗೆ ನೀರು ಬೇಕಾದರೆ ಅದನ್ನು ಹೋಟೆಲ್ ಸ್ವಾಗತ ಕಕ್ಷೆಗೆ ಕರೆ ಮಾಡಿ ತಿಳಿಸಬೇಕು. ಅವರು ಬಕೆಟ್ ನಲ್ಲಿ ತಂದು ಕೊಡುತ್ತಿದ್ದರು.
![]() |
| ಹಿಮಾಲಯದ ದೃಶ್ಯ |
ಪ್ರಯಾಣದಿಂದ ಸ್ವಲ್ಪ ಸುಸ್ತಾಗಿದ್ದೆವು. ಮತ್ತು ಸಣ್ಣ ಮಟ್ಟಿನ ಹಸಿವು ಇತ್ತು. ಆದುದರಿಂದ ಒಂದು ಪ್ಲೇಟ್ ಫಿಂಗರ್ ಚಿಪ್ಸ್ ಮತ್ತು ಅಲೂ ಬೋಂಡ ತರಿಸಿ ಛಳಿಯ ನಡುವೆ ಸವಿಯುತ್ತಾ ರೂಂ ನಿಂದ ಹೊರಗಿನ ನೋಟವನ್ನು ನೋಡುತ್ತಾ ನೋಡುತ್ತಾ ನಿದ್ದೆ ಬಂದದ್ದು ಗೊತ್ತೇ ಆಗಲಿಲ್ಲ. ಹಾಗೆ ಬಿದ್ದು ನಿದ್ದೆ ಮಾಡಿದ ನಮಗೆ ಎಚ್ಚರ ಆದದ್ದು ರಾತ್ರಿ 9 ಘಂಟೆಗೆ. ಅದೂ ಹೋಟೆಲ್ ಸ್ವಾಗತ ಕಕ್ಷೆಯಿಂದ ಊಟ ಬೇಕಾ ಎಂದು ಕರೆ ಬಂದಾಗ. ಆಮೇಲೆ ಎದ್ದು ಸ್ವಲ್ಪ ಮುಖ ತೊಳೆದು ಊಟಕ್ಕೆ ಆರ್ಡರ್ ಮಾಡಿದೆ. ರೊಟ್ಟಿ ಮತ್ತು ಪನೀರ್ ಕರಿ ಬಂತು. ಊಟ ಮಾಡಿ ಮೊಬೈಲ್ ನಲ್ಲಿ ದಿನದ ಸುದ್ದಿಗಳನ್ನು ನೋಡಿದೇ. ಸ್ವಲ್ಪ ನೋಡ್ತಾ ನೋಡ್ತಾ ಪುನಃ ನಿದ್ದೆ ಆವರಿಸಿದ್ದು ಕಣ್ಣು ಮುಚ್ಚಿ ಮಲಗಿದೆ.
ಮರುದಿನ ಬೆಳಗ್ಗೆ ಸುಮಾರು 6 ಘಂಟೆಗೆ ಎಚ್ಚರವಾಯಿತು. ಎದ್ದು ಪ್ರಾತಃವಿಧಿಯನ್ನು ಮುಗಿಸಿ ಶೂ ಹಾಕಿ ಹೊರಗಿನ ಒಂದು ರೌಂಡ್ ಹಾಕಿ ಬಂದೆ, ಹೋಟೆಲ್ ಹೊರಗಿನ ಹಳ್ಳಿ ಪ್ರದೇಶ, ಅಲ್ಲಿನ ಜನಗಳು, ಲೋಕಲ್ ಚಹಾ ಎಲ್ಲವೂ ಒಂದು ಸೂಪರ್ ಆಗಿತ್ತು. ಸುಮಾರು 2 ಘಂಟೆ ವಾಕಿಂಗ್ ಮಾಡಿ ಸೌಂದರ್ಯದ ಸವಿಯನ್ನು ಸವಿಯುತ್ತಾ ನನ್ನ ಚಿಕ್ಕಪ್ಪನ ಮಗ ಪುಟ್ಟ ಅಮೊಘನಿಗೆ ಸಿಮ್ಲಾದ ಐಸ್ ಗುಡ್ಡಗಳನ್ನು ತೋರಿಸುತ್ತಾ ಇದ್ದೆ. ಅವನಿಗೆ ಐಸ್ ನಲ್ಲಿ ಅಷ್ಟು ಇಂಟರೆಸ್ಟ್ ಇರಲಿಲ್ಲ. ಅವನದ್ದು ಒಂದೇ ರಾಗ " ಅಣ್ಣಾ ದೊಡ್ಡ ವಿಮಾನ ಎಲ್ಲಿದೆ ? '' ಪ್ರತಿ ಸಲ ನಾನು ಊರಿಗೆ ಹೋದಾಗ ಅವನು ನನ್ನ ಮೊಬೈಲ್ ನಲ್ಲಿ ವಿಮಾನದ ಚಿತ್ರಗಳನ್ನೇ ನೋಡುತ್ತಾನೆ. ಅದಕ್ಕೆ ಅವನು ಅದನ್ನೇ ಕೇಳುವುದು. ವಿಮಾನದ ಕಥೆ ಹೇಳುತ್ತಲೇ ಎದುರು ಒಂದು ಹಸು ಪ್ರತ್ಯಕ್ಷ. ನನಗೆ ಕಾಣದ ಹಸು ಅವನಿಗೆ ಆ ವೀಡಿಯೊ ಕಾಲ್ ನಲ್ಲಿ ಕಾಣುವುದೇ !? ತಕ್ಷಣ ಆ ಪುಟ್ಟು ಉಂಬೆ (ಪುಟ್ಟ ಹಸು) ತೋರಿಸು ಎಂದು ದುಂಬಾಲು ಬಿದ್ದ. ಕೊನೆಗೆ ಅದರ ಹಿಂದೆ ಹೋಗಿ ಅದನ್ನು ತೋರಿಸಿದ ಮೇಲೆ ಜನಕ್ಕೆ ಸಮಾಧಾನ ಆಯಿತು. ನಂತರ ವೀಡಿಯೊ ಕಾಲ್ ಮುಗಿಸಿ ರೂಂ ಗೆ ಹಿಂದುರಿಗಿದೆ. ಅಷ್ಟರಲ್ಲಿ ರೂಂ ಬಾಯ್ ಎರಡು ಬಕೆಟ್ ಬಿಸಿ ಬಿಸಿ ನೀರನ್ನು ತಂದಿರಿದ. ಆ ಚಳಿಗೆ ಬಿಸಿ ಬಿಸಿ ನೀರಿನ ಸ್ನಾನ ಸೋನೆ ಮೇನ್ ಸುಹಾಗ. ಸ್ನಾನದ ನಂತರ ಹೋಟೆಲ್ ಗ್ರೌಂಡ್ ಫ್ಲೋರ್ ನಲ್ಲಿದ್ದ ಮೆಸ್ಸ್ ಗೆ ಬೆಳಗ್ಗಿನ ತಿಂಡಿಗೆ ಎಂದು ಹೋದೆ. ಬಿಸಿ ಬಿಸಿ ಚಹಾ, ಪೂರಿ, ಅವಲಕ್ಕಿ, ಪರೋಟ , ಬ್ರೆಡ್ ಅಮ್ಲೆಟ್ ಇತ್ತು. ಮೊದಲು ಪೂರಿಗೆ ಕೈ ಹಾಕಿ ಒಂದು ಟೇಬಲ್ ನಲ್ಲಿ ಕುಳಿತುಕೊಂಡೆ. ತಿಂಡಿ ತಿನ್ನುತ್ತಾ ಪಕ್ಕದಲ್ಲಿ ಇನ್ನಿಬ್ಬರು ಬಂದು ಕುಳಿತುಕೊಂಡರು. ಅವರಲ್ಲಿ ಹೀಗೆ ಹಾಗೆ ಮಾತನಾಡುತ್ತಾ ಗೊತ್ತಾಯ್ತು ಅವರು ಬೆಂಗಲೂರಿಗರು ಎಂದು. ಮತ್ತೂ ವಿಷ್ಯ ಕೇಳಿದರೆ ಅವರಲ್ಲಿ ಒಬ್ಬರು ನಮ್ಮ ಊರಿನವರೇ ?!!
![]() |
| ಸ್ವಲ್ಪ ಪೋಸ್ ಕೊಡಿ ಎಂದರೆ ಹೀಗೇನೆ. ನನಗೆ ಫೋಸ ಕೊಡಲು ಗೊತ್ತಿಲ್ಲ ಮಾರಾಯರೇ |
ಅವರ ಹೆಸರು ಅರುಣ್ ಆಚಾರ್ಯ. ಕುಂದಾಪುರದವರು. ಸದ್ಯ ಬೆಂಗಳೂರಿನಲ್ಲಿ ಹಲವಾರು ಕಂಪೆನಿಗಳಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಪ್ರವಾಸಿಗರು. ಇವರು ತಮ್ಮ ಹಲವಾರು ಪ್ರವಾಸಿ ಘಟನೆಯನ್ನು ಹೇಳಿದರು. ಅವರೊಂದಿಗೆ ಸುಮಾರು ಒಂದು ಘಂಟೆ ಹರಟುತ್ತಾ ಹಲವಾರು ವಿಷಯಗಳನ್ನು ಕಲಿತೆ. ಅವರು ಇಲ್ಲಿಂದ ಮುಂದೆ ಸ್ಪಿತಿ ಕಣಿವೆ ಹೋಗುತ್ತಾರೆ ಎಂದು ಹೇಳಿದರು. ಅವರಿಗೆ ಅಲ್ಲಿಗೆ ಹೋಗುವ ಕೆಲವು ವಿಷಯಗಳನ್ನು ಹೇಳಿದೆ. ನನ್ನ ಪ್ರಿಯ ಮಿತ್ರ ರಜನೀಶ್ ಸ್ಪಿತಿ ಗೆ ಹೋಗಿದ್ದ. ಅವನು ನನಗೆ ಏನೆಲ್ಲಾ ಹೇಳಿದ ಅದನ್ನೇ ಇಲ್ಲಿ ಹೇಳಿದೆ.
![]() |
| ಕುಂದಾಪುರದ ಶ್ರೀ ಅರುಣ್ ಆಚಾರ್ಯ |
ನಂತರ ಹೋಟೆಲ್ ನಿಂದ ನಮಗೆ ಸಿಮ್ಲಾ ತನಕ ಹೋಗಲು ಓನರ್ ಅವರು ಒಂದು ಕ್ಯಾಬ್ ನ ವ್ಯವಸ್ತೆ ಮಾಡಿದ್ದರು. ಬ್ಯಾಗ್ ಪ್ಯಾಕ್ ಮಾಡಿ ಹೋಟೆಲ್ ನ ಫುಲ್ ಮತ್ತು ಫೈನಲ್ ಹಣವನ್ನು ಸರಿ ಹೊಂದಿಸಲು ಸ್ವಲ್ಪ ಸಮಯ ಹಿಡಿಯಿತು. ನಂತರ ಕ್ಯಾಬ್ ನಲ್ಲಿ ವಾಪಸ್ ಸಿಮ್ಲಾ ತನಕ ಹೋಗುತ್ತಿದ್ದೆವು, ಹಲವಾರು ಕಡೆ ಸಣ್ಣ ಪುಟ್ಟ ಜಾಮ್ ಸಿಕ್ಕಿತು. ಆದರೆ ನಿನ್ನೆಯಂತೆ ದೊಡ್ಡ ಜಾಮ್ ಸಿಕ್ಕಿಲ್ಲ. ಅರ್ಧ ದಾರಿಯನ್ನು ತಲುಪಿದಾಗ ನನ್ನ ಆಫೀಸ್ ಗೆಳತಿ ಸೋನಿಕಾ ತನ್ನ ಪ್ರಿಯತಮನ ಸಂಖ್ಯೆಯನ್ನು ಕೊಟ್ಟಿದ್ದಳು. ತಕ್ಷಣ ಆತನಿಗೆ ಕರೆ ಮಾಡಿದೆ. ಪುಣ್ಯಕ್ಕೆ ಅವನು ಸಿಮ್ಲಾದಲ್ಲೇ ಇದ್ದ. ನೀವು ಇಲ್ಲಿಗೆ ಬನ್ನಿ ನಾನು ಅಲ್ಲೇ ಸಿಗುತ್ತೇನೆ ಎಂದು ಒಂದು ಲೊಕೇಶನ್ ಹೇಳಿದ. ಇದು ಯಾವ ಜಾಗ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾಗ ಡ್ರೈವರ್ ಇದು ಇಲ್ಲೇ ಹತ್ತಿರ ಎಂದು ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋದರು. ಒಂದು ಐದು ನಿಮಿಷಗಳ ಕಾಯುವಿಕೆಯ ನಂತರ ಈ ಜನ ಪ್ರತ್ಯಕ್ಷ ಆದ.
![]() |
| ಹೋಟೆಲ್ ನ ಪಾರ್ಟ್ನರ್ ಅವರು. |
ಈತನ ಹೆಸರು ಆಯುಶ್ ಶರ್ಮಾ. MBA ಪಧವೀಧರ. ಈಗ ತನ್ನ ಮಿತ್ರರ ಜೊತೆಗೆ ಸೇರಿ ಆಪಲ್ ನಿಂದ ಕುರುಕುಲು ಚಿಪ್ಸ್ ತಯಾರಿಸಿ ಅದನ್ನು ಮಾರುಕಟ್ಟೆಗೆ ಬಿಡುತ್ತಿದ್ದಾನೆ. ಆಪಲ್ ಚಿಪ್ಸ್ ಎಂದರೆ ನಮ್ಮ ಬಟಾಟೆ ಚಿಪ್ಸ್ ನ ಹಾಗೆಯೇ ಆದರೆ ಎಣ್ಣೆಯಲ್ಲಿ ಕರಿಯದೆ ಅದನ್ನು ಬಿಸಿಲಿನಲ್ಲಿ ಒಣಗಿಸಿ ಮಾಡಿದ್ದು. ಇದು ಎಂತಹ ವಯಸ್ಸಿನ ಜನರಿಗೂ ತಿನ್ನ ಬಹುದು. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ. ಅಲ್ಲದೆ ಇದನ್ನು ತಿಂದರೆ ದೇಹಕ್ಕೆ ಬಹಳ ಒಳ್ಳೆಯದು. ಎಂದು ಅದರ ವೈಶಿಷ್ಟ್ಯವನ್ನು ತಿಳಿಸಿದ. ಹೀಗೆ ಮಾತನಾಡುತ್ತಾ ಕಾರನ್ನು ಪಾರ್ಕ್ ಮಾಡಿ ಆತನ ನೆಚ್ಚಿನ ಬಾರ್ ಒಂದಕ್ಕೆ ಕರೆದುಕೊಂಡು ಹೋದ. ಅಲ್ಲಿನ ವಿಶೇಷತೆ ಏನು ಎಂದರೆ ಅಲ್ಲಿ ಸ್ಥಳೀಯವಾಗಿ ತಯಾರಿಸಿದ ಅಲ್ಕೋಹಾಲ್ ಇಲ್ಲದ ಬಿಯರ್ ಸಿಗುತ್ತದೆ. ಸೊ ರುಚಿ ಹೇಗಿದೆ ಎಂದು ನೋಡೋಣ ಎಂದು ಒಂದು ಗ್ಲಾಸ್ ಆರ್ಡರ್ ಮಾಡಿದೆ. ಗ್ಲಾಸ್ ನ ಸೈಜ್ ನೋಡಿದರೆ ಯಬ್ಬಾ ಇದು ಎಂತ ಆನೆಯ ಗ್ಲಾಸಾ ಮಾರಾಯರೇ ಎಂದು ಒಳಗೆ ಒಳಗೆ ಹೇಳಿಕೊಂಡೆ. ರುಚಿಯು ತುಂಬಾ ಚೆನ್ನಾಗಿ ಇತ್ತು ಒಂದು ರೀತಿಯಲ್ಲಿ ನಮ್ಮ ಆಪಲ್ ಶೇಕ್ ನ ಥರವೇ. ಆದರೆ ರುಚಿಯಲ್ಲಿ ಸ್ವಲ್ಪ ಹುಳಿ-ಸ್ವಲ್ಪ ಕಹಿ. ಹೀಗೆ ಬಿಯರ್ ಹೀರುತ್ತಾ ಊಟಕ್ಕೆ ಅಲ್ಲಿನ ಸ್ಥಳೀಯ ಪಲಾವ್ ಒಂದನ್ನು ತರಿಸಿದೆವು. ಇಡೀ ಪಲಾವ್ ಸಪ್ಪೆಯಾಗಿ ನನಗೆ ಖುಷಿ ಆದರೆ ಅದರಲ್ಲಿ ಹಾಕಿದ ಮೆಣಸು ಎಷ್ಟು ಖಾರ ಇತ್ತು ಎಂದರೆ ನನ್ನ ಕಣ್ಣು-ಬಾಯಿ-******* ಎಲ್ಲಾ ಕಡೆ ನೀರು. ಸುಮಾರು ಐದು ನಿಮಿಷ ಬಾಯಿ ಮುಖ ತೊಳೆದಿದ್ದೇನೆ. ಬಿಯರ್ ನಿಂದ ಅಂತೂ ಗೊತ್ತಿಲ್ಲ ಆದರೆ ಆ ಮೆಣಸಿನಿಂದ ನಾನು ಫುಲ್ ಅತ್ತಿದ್ದೆ.
![]() |
| ಬಿಯರ್ ಸೇವನೆಯಲ್ಲಿ ತೊಡಗಿರುವ ಆಯುಶ್ ಮತ್ತು ನಾನು |
![]() |
| ರೈಲಿನಲ್ಲಿ ಫೋಟೋಶೂಟ್ |
ಹೀಗೆ ಮಾಲ್ ರೋಡ್ ನಲ್ಲಿ ತಿರುಗಿ ಕಾರ್ ನಲ್ಲಿ ಕುಳಿತು ರೈಲ್ವೆ ಸ್ಟೇಷನ್ ಗೆ ಹೋಗುವಾಗ ಘಂಟೆ ಐದು. ಸರಿ ನಾನು ಭೋಗಿ ಸಂಖ್ಯೆ ಯಾವುದು ಎಂದು ನೋಡುತ್ತೇನೆ ಎಂದು IRCTC ಆಪ್ ಓಪನ್ ಮಾಡುತ್ತೇನೆ ಅದರಲ್ಲಿ ರೈಲಿನ ಸಮಯ 5.10 ತೋರಿಸುತ್ತಿತ್ತು. ನಮಗೆ ಎದೆಯಲ್ಲಿ ಡವಡವ ಆಗುತ್ತಿತ್ತು ಏಕೆಂದರೆ ಇದನ್ನು ಬಿಟ್ಟರೆ ಬೇರೆ ರೈಲು ಇಲ್ಲ. ಈ ರೈಲು ತಲುಪಿ ಒಂದು ಘಂಟೆಯಲ್ಲಿ ಕಾಲ್ಕಾ ಮೇಲ್ ಡೆಲ್ಲಿ ಗೆ ಹೋಗುತ್ತದೆ. ಆಯುಶ್ ದಾರಿ ಸಿಕ್ಕಲ್ಲಿ ಕಾರನ್ನು ನುಗ್ಗಿಸಿ ಐದು ಹನ್ನೆರಡಕ್ಕೆ ರೈಲ್ವೆ ಸ್ಟೇಷನ್ ಗೆ ತಲುಪಿಸಿದ. ಮೊದಲು ನಾನು ಇಳಿದು ರೈಲು ಉಂಟಾ ಇಲ್ಲವಾ ಎಂದು ನೋಡುತ್ತೇನೆ ಎಂದು ಹೋದೆ. ಸಿಗದೇ ಇದ್ದಲ್ಲಿ ಅದನ್ನು ಮುಂದೆ ಕವರ್ ಮಾಡುವ ಎಂದು ಆಯುಶ್ ಹೇಳಿದ್ದ. ಪುಣ್ಯಕ್ಕೆ ರೈಲು ನಿಂತಿತ್ತು. ತಕ್ಷಣ ರೈಲಿನ ಮುಂದೆ ಆತ್ಮಹತ್ಯೆ ಮಾಡುವ ರೀತಿ ಅಡ್ಡ ಹೋಗಿ ನಿಂತು ಡ್ರೈವರ್ ಗೆ ಹೇಳಿದೆ ಅಣ್ಣಾ ಒಂದೇ ಒಂದು ನಿಮಿಷ ನನ್ನ ಜೊತೆ ಇನ್ನೊಬ್ಬರು ಇದ್ದಾರೆ ಬರ್ತಾರೆ ಪ್ಲೀಸ್ ನಿಲ್ಲಿಸಿ ಎಂದು. ಅದಕ್ಕೆ ಅವನು ಹೇಳಿದ ಮೊದಲು ಹಳಿಯಿಂದ ಸರಿಯಪ್ಪ, ರೈಲು ಐದು ಇಪ್ಪತ್ತ ಐದಕ್ಕೆ ಹೊರಡುತ್ತದೆ ಎಂದು. ಅದೇ ಸಮಯಕ್ಕೆ ಆಯುಶ್ ಕೂಡ ಬಂದ. ನಮ್ಮ ಸಾಮಾನನ್ನು ಹಿಡಿದು ರೈಲಿನ ಭೋಗಿ ಒಳಗೆ ಹಾಕಿ ಟಾಟ ಬೈ ಬೈ ಎನ್ನುವಷ್ಟರಲ್ಲಿ ರೈಲು ಹೊರಟಿತು. ಮತ್ತೆ ಆಪ್ ಓಪನ್ ಮಾಡಿ ನೋಡಿದರೆ ಅದು ನಾವು ನಿನ್ನೆ ಬೆಳಿಗ್ಗೆ ಬಂದ ರೈಲಿನ ಸಮಯವನ್ನು ತೋರಿಸುತ್ತಿತ್ತು.
![]() |
| ಒಂದು ಬೈ ಬೈ ಸೆಲ್ಫಿ |
![]() |
| ಬೆಳ್ಳಂಬೆಳಗ್ಗೆ ದೆಹಲಿಯ ಕನ್ನಾಟ್ ಪ್ಲೇಸ್ ನನ್ನನ್ನು ಸ್ವಾಗತಿಸಿದ್ದು ಹೀಗೆ. |












Cholo aajo
ReplyDelete